ಒಹಾಯೊ ನದಿ: ಅಮೆರಿಕ ಸಂಯುಕ್ತಸಂಸ್ಥಾನದ ಒಂದು ನದಿ. ಒಹಾಯೊ ರಾಜ್ಯದ ದಕ್ಷಿಣ ಪುರ್ವಗಳಲ್ಲಿ ಗಡಿರೇಖೆಯಂತೆ ಹರಿಯುತ್ತದೆ. ಮಿಸಿಸಿಪಿಯ ಏಕೈಕ ಮುಖ್ಯ ಉಪನದಿ. ಅಲೆಘನಿ ಮತ್ತು ಮನೊಗೆಹಲ ನದಿಗಳು ಪಿಟ್ಸ್‌ಬರ್ಗ್ನಲ್ಲಿ ಕೂಡಿ ಸಂಭವಿಸಿರುವ ಈ ನದಿಗೆ ಸುಮಾರು 554258 ಚಕಿಮೀ ಜಲಾನಯನ ಪ್ರದೇಶವಿದೆ. ಉತ್ತರಾಭಿಮುಖವಾಗಿ ಹರಿಯುತ್ತಿದ್ದ ಅಪಲೇಷಿಯನ್ ತೊರೆಗಳಿಗೆ ಮಂಜುಗೆಡ್ಡೆಯಿಂದ ತಡೆಯುಂಟಾಗಿ, ತುಂಬಿದ ನೀರು ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಬಿರುಕುಗಳ ಮೂಲಕ ಹರಿದದ್ದರಿಂದ ಸಂಭವಿಸಿದ ಕಣಿವೆಯಲ್ಲಿ ಈ ನದಿ ಹರಿಯುತ್ತದೆ. ತತ್ಫಲವಾಗಿ ಕೆಲವು ಕಡೆಗಳಲ್ಲಿ ಕಮರಿಗಳೇ ನದಿಯ ಪಾತ್ರ. ಒಮ್ಮೊಮ್ಮೆ ಇದು ಥಟ್ಟನೆ ತನ್ನ ದಿಕ್ಕನ್ನು ಬದಲಿಸುತ್ತದೆ. ಎತ್ತರದ ನೆಲದಿಂದ ಅತಿ ಹಳ್ಳದ ಪ್ರದೇಶಕ್ಕೆ ಅಂಬಿನಂತೆ ಜಾರುತ್ತದೆ. ಹೀಗಾಗಿ ಜಲಪಾತಗಳು ಸಂಭವಿಸಿವೆ.

ಒಹಾಯೊ ಒಳ್ಳೆಯ ಜಲಮಾರ್ಗ. ಪ್ರವಾಹ ಕಾಲದಲ್ಲಿ ಜಲಪಾತದ ಮೇಲೂ ಹಡಗುಗಳು ಸಾಗುತ್ತವೆ. ಇಂಥೆಡೆಗಳಲ್ಲಿ ಕಾಲುವೆ ತೋಡಿರುವುದರಿಂದ 1828ರಿಂದ ಜಲಪಾತಗಳ ಅಡಚಣೆಯೂ ಇಲ್ಲ. ಕೆಳ ಮಿಸಿಸಿಪಿಗೆ ಬರುವ ನೀರಿನ ಮುಕ್ಕಾಲು ಭಾಗ ಒಹಾಯೊವಿನಿಂದ ಲಭಿಸುತ್ತದೆ. ಒಹಾಯೊ ಕಣಿವೆಯಲ್ಲಿ ವಾರ್ಷಿಕ ಮಳೆಯ ಸರಾಸರಿ 44.7". ನದೀಪ್ರವಾಹ ಸು. 0.6096 ಮೀಗಳಿಂದ 13-16 ಮೀಗಳವರೆಗೆ ವ್ಯತ್ಯಾಸವಾಗುವುದುಂಟು. ಚಳಿಗಾಲದ ಕೊನೆಯಲ್ಲಿ ಅಥವಾ ವಸಂತದ ಆದಿಯಲ್ಲಿ ಪ್ರವಾಹದ ಹೆಚ್ಚಳ ಕಂಡುಬರುತ್ತದೆ. ಬೇಸಗೆಯಲ್ಲಿ ನೀರು ಆವಿಯಾಗುವುದರಿಂದ ಆ ಋತುವಿನ ಕೊನೆಯಲ್ಲಿ ಪ್ರವಾಹ ಬಹಳ ಇಳಿಯುತ್ತದೆ. ಪರಮಾವಧಿ ಪ್ರವಾಹ ಬಂದಿದ್ದದು 1927ರಲ್ಲಿ.
ಒಹಾಯೊ ನದಿಯ ಮೇಲೆ 1782ರಷ್ಟು ಹಿಂದಿನಿಂದಲೂ ದೋಣಿಗಳು ಸಂಚರಿಸುತ್ತಿವೆ. ಪ್ರಯಾಣಿಕ ನೌಕೆ ಮೊಟ್ಟಮೊದಲು ಸಿನ್ಸಿನ್ಯಾಟಿಯಿಂದ ಪಿಟ್ಸ್‌ಬರ್ಗಿಗೆ 1794ರಲ್ಲಿ ಸಂಚಾರ ಮಾಡಿತು. 1880ರಲ್ಲಿ ಪಿಟ್ಸ್‌ಬರ್ಗ್ ಪ್ರದೇಶ ಕೈಗಾರಿಕೆಯಲ್ಲಿ ಮುಂದುವರಿದಂತೆ ಈ ಜಲಮಾರ್ಗವನ್ನು ಕಲ್ಲಿದ್ದಲು, ಮರದ ದಿಮ್ಮಿ ಮುಂತಾದವುಗಳನ್ನು ಸಾಗಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಯಿತು. 1910ರಲ್ಲಿ ಅಮೆರಿಕ ಕಾಂಗ್ರೆಸ್ ಈ ಜಲಮಾರ್ಗವನ್ನು ಅಭಿವೃದ್ಧಿಪಡಿಸಲು ಯೋಚಿಸಿ ಅದಕ್ಕಾಗಿ ಒಂದು ಯೋಜನೆ ತಯಾರಿಸಿತು. ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಸದಾಕಾಲವೂ 3 ಮೀ ನೀರುಳ್ಳ ಕಾಲುವೆಯನ್ನು ಜಲಮಾರ್ಗಕ್ಕೆ ಒದಗಿಸಲಾಯಿತು.	(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ